ಸುಗ್ಗಲೆ
	ಚಾಳುಕ್ಯ ಜಗದೇಕಮಲ್ಲ ಎರಡನೆಯ ಜಯಸಿಂಹನ (ಸು.1015-44) ಪಟ್ಟದರಸಿ. ಈಕೆ ಮೊದಲು ಶೈವಳಾಗಿದ್ದು ಅನಂತರ ದೇವರ ದಾಸಿಮಯ್ಯನಿಂದ ವೀರಶೈವ ದೀಕ್ಷೆಯನ್ನು ಸ್ವೀಕರಿಸಿದಳೆಂಬುದು ಸಾಹಿತ್ಯಕೃತಿಗಳಲ್ಲಿನ ಹೇಳಿಕೆ. ವೀರಶೈವ ಕವಿಗಳು ಮತ್ತು ಪುರಾಣಕರ್ತೃಗಳು ಈಕೆಯನ್ನು ಭಕ್ತಿಯಿಂದ ಸ್ಮರಿಸಿದ್ದಾರೆ. ಅನೇಕ ಶಾಸನಕವಿಗಳು, ಕವಿಗಳು ಈಕೆಯನ್ನು ಹೊಗಳಿದ್ದಾರೆ. ದೇವೂರು (1029), ಕೆರೆಸಂತೆ (1182) ಮತ್ತು ಬೇಲೂರಿನ (1220) ಶಾಸನಗಳು ಈಕೆಯನ್ನು ಮುಕ್ತಕಂಠದಿಂದ ಹೊಗಳಿವೆ. ಪಾಶುಪತಯೋಗಾಚಾರ್ಯ ಬ್ರಹ್ಮರಾಶಿ ಪಂಡಿತರಿಗೆ ದತ್ತಿಬಿಟ್ಟ ವಿವರಣೆಯಿರುವ ದೇವೂರು ಶಾಸನ ಈಕೆಯನ್ನು ದ್ವಿತೀಯಲಕ್ಷ್ಮಿ, ವಿಶಿಷ್ಟಜನಕಾಮಧೇನು, ಆಶ್ರಿತಜನಕಲ್ಪಲತೆ, ರೂಪವಿದ್ಯಾಧರಿ, ಕಲಿಕಾಲಸರಸ್ವತಿ, ಶ್ರೀಮಜ್ಜಗದೇಕಮಲ್ಲದೇವರ ವಿಶಾಲ ವಕ್ಷಸ್ಥಳ ನಿವಾಸಿನಿ ಶ್ರೀಮತ್ಸುಗ್ಗಲದೇವಿ ಎಂದು ಹೊಗಳಿವೆ. ಕೆರೆಸಂತೆಯ ಶಾಸನ ಕವಿಯು ಸುಗ್ಗಲದೇವಿ, ಶಾಂತಲದೇವಿ (ವಿಷ್ಣುವರ್ಧನನ ರಾಣಿ), ಕೇತಲದೇವಿ (ಬಲ್ಲಾಳನ ರಾಣಿ) ಈ ಮೂವರು ಭಾಗ್ಯವಂತೆ ಯರು, ಘನತೆವೆತ್ತವರು ಎಂದು ವರ್ಣಿಸಿದ್ದಾನೆ. ಹೊಯ್ಸಳ ದಂಡನಾಯಕ ಕುವರಲಕ್ಷ್ಮನ ಹೆಂಡತಿ ಸುಗ್ಗಲೆಯು ಜಯಸಿಂಹನ ರಾಣಿ ಸುಗ್ಗಲೆಗೆ ಸಮಾನಳು ಎಂದು ಬೇಲೂರಿನ ಶಾಸನ ಬಣ್ಣಿಸಿದೆ. ಅತ್ತಿಮಬ್ಬೆಯ ತರುವಾಯ ಕರ್ನಾಟಕದ ಸಾಂಸ್ಕøತಿಕ ಇತಿಹಾಸದಲ್ಲಿ ಸುಗ್ಗಲೆಯ ಹೆಸರು ಪ್ರಖ್ಯಾತವಾದುದು.	
											(ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ